ಜನಸ್ನೇಹಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ: 

ಕಡುಬಡತನದಿಂದ ಆಡಳಿತ ಲೋಕದ ಶಿಖರದವರೆಗೆ

ಪ್ರೇರಣಾಭರಿತ ಜೀವಂತ ಕಥೆ

25-11-2025 ಮಂಗಳವಾರದ ಸಂಜೆ. ಬೆಳಗಾವಿಯಿಂದ ಕಲಬುರಗಿಯತ್ತ ಸಾಗುತ್ತಿದ್ದ ಒಂದು ಇನ್ನೋವಾ ಕಾರು ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಅಚಾನಕ್ ನಿಯಂತ್ರಣ ತಪ್ಪುತ್ತದೆ. ಕ್ಷಣ ಮಾತ್ರದಲ್ಲಿ ಸಂಭವಿಸಿದ ಆ ಭೀಕರ ಅಪಘಾತ, ಕರ್ನಾಟಕದ ಶ್ರೇಷ್ಠ ಐಎಎಸ್‌ ಅಧಿಕಾರಿಗಳಲ್ಲಿ ಒಬ್ಬರ ಜೀವನಯಾನಕ್ಕೆ ಅಂತ್ಯ ಮಾಡುತ್ತದೆ. ಅವರು — ಮಹಾಂತೇಶ್ ಬೀಳಗಿ. ಬಡತನದ ಮಣ್ಣಿನಿಂದ ಬೆಸೆದು ಎದ್ದು ಆಡಳಿತದ ಅತಿ ಎತ್ತರದ ಮೆಟ್ಟಿಲುಗಳನ್ನು ತಲುಪಿದ ವ್ಯಕ್ತಿ. ಸಾವಿರಾರು ಯುವಕರಿಗೆ ಆಶಾದೀಪ.

ಅಪಘಾತದ ಸುದ್ದಿ ಕಲಬುರಗಿಗೆ ತಲುಪುವಷ್ಟರಲ್ಲಿ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿಹೆಚ್ಓ ಶರಣಬಸಪ್ಪ ಕ್ಯಾತನಾಳ್ ಸೇರಿದಂತೆ ಹಲವಾರು ಅಧಿಕಾರಿಗಳು ಆಸ್ಪತ್ರೆಗೆ ತೆರಳುತ್ತಾರೆ. ವೈದ್ಯರು ಹೇಳುವ ಸುದ್ದಿ ಹೃದಯ ಕಿತ್ತುಕೊಳ್ಳುವಂತದ್ದು — “ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ…”

ಬಡತನದ ಮಣ್ಣು, ದೊಡ್ಡ ಕನಸುಗಳು :

1974ರ ಮಾರ್ಚ್ 27. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲೊಂದು ಸಣ್ಣ ಮನೆ. ಜೀವನದಲ್ಲಿ ಯಾವಾಗಲೂ ಹೋರಾಟ ಮಾತ್ರ ಕಂಡ ಕುಟುಂಬ. ಮಹಾಂತೇಶ್ ಬೀಳಗಿ ಅವರ ಬಾಲ್ಯವೂ ಅದೇ ಹೋರಾಟದ ಜಾಲದಲ್ಲಿ. ಪೋಷಕರು ಕೂಲಿ ಕೆಲಸ ಮಾಡಿ ಮನೆ ನಡೆಸುವ ಸಂದರ್ಭ… ಮಕ್ಕಳಿಗೆ ಶಿಕ್ಷಣ ಎಂಬುದೇ ದೊಡ್ಡ ‘ಸಾಧನೆ’ ಇದ್ದ ಸಂದರ್ಭ… ಆದರೂ, ಈ ಹುಡುಗನ ಕಣ್ಣುಗಳಲ್ಲಿ ಮಾತ್ರ ಸದಾ ಹೊಳೆಯುತ್ತಿತ್ತು, “ಒಂದು ದಿನ ನಾನು ದೊಡ್ಡದಾಗಿ ಬೆಳೆಯಬೇಕು.” ಸುದ್ದಿ, ಸಂದರ್ಶನ, ವಿದ್ಯಾರ್ಥಿಗಳ ಜೊತೆಗಿನ ಮಾತುಕತೆಗಳಲ್ಲಿ ಅವರು ಅನೇಕ ಬಾರಿ ಇದನ್ನು ಹೇಳಿದ್ದಾರೆ, “ನಾವು ಬಡತನದಲ್ಲಿ ಬೆಳೆದರೂ, ನಮ್ಮ ಕನಸುಗಳು ಎಂದಿಗೂ ಬಡವಾಗಬಾರದು.” ಅವರೊಳಗಿನ ಧೈರ್ಯ, ಹಠ ಮತ್ತು ಕರಗದ ಆತ್ಮವಿಶ್ವಾಸವೇ ಅವರಿಗೆ ಮೊದಲಿಗೆ ಕೆಎಎಸ್ ಅಧಿಕಾರಿಯ ಗುರಿ ತಲುಪಿಸಿತು. ನಂತರ ಅವರು ಅದೇ ಶ್ರಮದಿಂದ ಐಎಎಸ್ ಗೆ ಬಡ್ತಿ ಪಡೆದು ಕರ್ನಾಟಕ ಕೇಡರ್‌ನ ಪ್ರಮುಖ ಆಡಳಿತಗಾರನಾದರು.

ಜನಪರ ಆಡಳಿತಗಾರ, ಬಡವರ ಮಿತ್ರ :

ದಾವಣಗೆರೆಯ ಜಿಲ್ಲಾಧಿಕಾರಿಯಾಗಿ, ನಂತರ ಬೆಸ್ಕಾಂ ಎಂಡಿಯಾಗಿ, ಮತ್ತು ಇತ್ತೀಚೆಗೆ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಎಲ್ಲೆಡೆ ಒಂದೇ ಮಾತು ಕೇಳುತ್ತಿತ್ತು: “ಮಹಾಂತೇಶ್ ಬೀಳಗಿ ಎಂದರೆ ಹೃದಯವಂತ ಅಧಿಕಾರಿ.” ಬಡವರ ಮನೆಗೆ ಕಾಲಿಟ್ಟಾಗ ಅವರು ಅಧಿಕಾರಿಯಲ್ಲ, ‘ಸ್ವಂತ ಮನೆಯವನೇ’ ಅನ್ನೋ ಅನುಭವ ಕೊಡುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಅವರು ಯಾವೂದೂ ಪಾಠ ಹೇಳಿಕೊಡುತ್ತಿದ್ದವರಲ್ಲ ಅವರ ಮಾತುಗಳು, ಜೀವನವೇ ಹೇಳಿಕೊಟ್ಟ ಅನುಭವಗಳಾಗಿದ್ದವು. “ಸಮಾಜ ನಮ್ಮನ್ನು ಬೆಳೆಸಿದೆ. ಈಗ ಅದು ನಮ್ಮ ಕಡೆಗೆ ನೋಡುತ್ತಿದೆ. ನಮ್ಮಿಂದ ಸಾಧ್ಯವಿರುವದನ್ನಾದರೂ ಸಮಾಜಕ್ಕೆ ಹಿಂದಿರುಗಿಸಬೇಕು,” ಎನ್ನುತ್ತಿದ್ದ ಅವರು ಅನೇಕ ಯುವಕರಿಗೆ ದಾರಿ ತೋರಿದ ದೀಪ.

ಅಭಿಮಾನಿಗಳು, ವಿದ್ಯಾರ್ಥಿಗಳು, ಯುವಕರಲ್ಲಿ ಆಘಾತ :

ಮಹಾಂತೇಶ್ ಬೀಳಗಿ ಅವರ ಜೀವನವೇ ಸಾವಿರಾರು ಯುವಕರಿಗೆ “ನಾನು ಕೂಡ ಮಾಡಬಹುದು” ಎಂಬ ನಂಬಿಕೆ ತುಂಬಿದ ಪಠ್ಯಪುಸ್ತಕ. ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ದೇವರಂತಿದ್ದರು. ಅವರ ಯಶೋಗಾಥೆ ಅನೇಕ ಜನರಿಗೆ ಜೀವನದ ಗುರಿ. ಅವರ ಅಕಾಲಿಕ ಅಗಲಿಕೆ ರಾಜ್ಯದ ಆಡಳಿತಕ್ಕೆ ಮಾತ್ರವಲ್ಲ, ಪ್ರತಿ ಕನಸುಗಾರ ಯುವ ಮನಸ್ಸಿಗೂ ಭಾರೀ ನಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾವಿರಾರು ಮಂದಿ ತಮ್ಮ ದುಃಖವನ್ನು ಬರೆದಿದ್ದಾರೆ. ಭಾವುಕ ನೆನಪುಗಳು, ನಂಬಲಾಗದ ನೋವು, ಮತ್ತು ಅವರು ಮಾಡಿದ ಕೆಲಸಗಳ  ಪ್ರವಾಹ.

ಒಂದು ಜೀವನ — ಶ್ರಮ, ಮಮತೆ, ಸೇವೆಯ ಚಿರಸ್ಮರಣೆ :

ಕಡುಬಡತನದಲ್ಲಿ ಹುಟ್ಟಿ, ಶ್ರಮದಿಂದ ಎದ್ದು, ಜನರಿಗಾಗಿ ಬದುಕಿ, ಪ್ರೇರಣೆಯಾಗಿ ಉಳಿದ ವ್ಯಕ್ತಿತ್ವ — ಮಹಾಂತೇಶ್ ಬೀಳಗಿ. ಅವರ ಕೆಲಸ, ಅವರ ಮಮತೆ, ಅವರ ಸಂದೇಶ — ಯುವಕರ ಹೃದಯಗಳಲ್ಲಿ ಸದಾಕಾಲ ಜೀವಂತ.

Leave a Reply

Your email address will not be published. Required fields are marked *