ನಂಬಿಕೆಗಳನ್ನು ‘ಮೂಢನಂಬಿಕೆ’ಗಳೆಂದು ಅನೇಕರು ಜರೆದಿದ್ದಾರೆ. ಇಂದೂ ಸಹ ಜರೆಯುತ್ತಿದ್ದಾರೆ. ಆದರೆ ನಂಬಿಕೆಗಳನ್ನು ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಿದರೆ ಒಂದೊಂದರ ಹಿಂದೆಯೂ ಒಂದು ತತ್ವ ಅಡಗಿರುವುದು ಗೋಚರವಾಗುತ್ತದೆ. ಅದರಲ್ಲಿಯೇ ಅಂಧಶ್ರದ್ಧೆಗಳಿಗೆ ಒಳಗಾಗಿ ಕೆಲವು ಪದ್ಧತಿಗಳಿಗೆ ನಿಷ್ಠರಾಗಿ ನಡೆಯುವವರ ನಂಬಿಕೆಗಳನ್ನು ಮಾತ್ರ ಮೂಢನಂಬಿಕೆಗಳೆಂದು ಕರೆಯಬಹುದಲ್ಲದೆ, ಸಾರ್ವತ್ರಿಕವಾಗಿ ಎಲ್ಲ ನಂಬಿಕೆಗಳಿಗೂ ಮೂಢನಂಬಿಕೆಯೆಂಬ ಮಾತು ಅನ್ವಯಿಸುವುದಿಲ್ಲ. ನಂಬಿಕೆ ಮತ್ತು ಮೂಢನಂಬಿಕೆ ಎರಡೂ ಬೇರೆ ಬೇರೆ ಅರ್ಥ ಹೊಂದಿದ ಪದಗಳಾಗಿವೆ. ಇಂಗ್ಲೀಷಿನಲ್ಲಿ ‘ನಂಬಿಕೆ’ಗೆ Belief ಮತ್ತು ‘ಮೂಢನಂಬಿಕೆ’ಗೆ Superstition ಎಂದು ಕರೆಯಲಾಗುತ್ತದೆ. “ಮೂಢನಂಬಿಕೆಗಳಲ್ಲಿ (Superstition) ಅಭಾಸಗಳಿರುತ್ತವೆ. ಆದರೆ ಅವುಗಳಿಗೆ ಯಾವುದೇ ವಿಧಾನ-ವಿವೇಚನೆಯ ಆಧಾರಗಳಾಗಲಿ, ಅಗತ್ಯತೆಗಳಾಗಲಿ, ಋಣಭಾರ ಭಾವವಾಗಲಿ ಇರುವುದಿಲ್ಲ. ಇಂಗ್ಲೀಷಿನ Super ಎಂಬ ಪದವು ‘ಹೆಚ್ಚು’ ಎಂಬ ಅಭಿಪ್ರಾಯವನ್ನೀಯುವುದಲ್ಲದೆ, ವ್ಯಕ್ತಿಗಳನ್ನು ಅಗೋಚರವಾದ ಮತ್ತು ಮಾಂತ್ರಿಕವಾದ ವಿಚಾರಗಳನ್ನು ನಂಬುವಂತೆ ಮಾಡುತ್ತದೆ”
“There are ofcourse, other manifestestations of the supersittious spint of a comparitively incocuous kind, such as belief in faries, superstitions con-cerning the weather lucky and unlucky days, and the like”. ಎಂದು ವಿಶ್ವಕೋಶದಲ್ಲಿ ಹೇಳಲಾಗಿದೆ.
“ಮೂಢನಂಬಿಕೆಗಳು ಕಿನ್ನರರ ಹವಾಗುಣದ ಕೆಟ್ಟ ಮತ್ತು ಒಳ್ಳೆಯ ದಿನಗಳ ವಿಚಾರದಲ್ಲಿ ಯಾವುದೋ ಒಂದು ರೀತಿಯ ಭಯವನ್ನುಂಟು ಮಾಡುತ್ತವೆ. ಅಗೋಚರ ವಸ್ತುಗಳ ವಿಷಯದಲ್ಲಿ ಸತತ ಭಯಭರಿತರು ಮೂಢನಂಬಿಕೆಗಳಿಗೆ ಬದ್ಧರಾಗಿರುತ್ತಾರೆ. ಮೂಢನಂಬಿಕೆಗಳು ಧಾರ್ಮಿಕ ಮತ್ತು ಮಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತಿದ್ದು ಅವು ಸಮಾಜದ ಒಪ್ಪಿಗೆ ಪಡೆದು ಜನತೆಯ ಹಲವು ಆಚರಣೆಗಳಲ್ಲಿ ಕಂಡುಬರುತ್ತವೆ”
“ಮೂಢನಂಬಿಕೆಯು ಆಧಾರವಿಲ್ಲದ್ದು, ಶೂನ್ಯವಾದುದು” ಎಂದು ವರ್ಜಿಲ್ ಮಹಾಕವಿ ಹೇಳಿದ್ದಾನೆ.
ಒಟ್ಟಿನಲ್ಲಿ ಸಮಾಜದಲ್ಲಿನ ಯಾವ ತಳಬುಡವಿಲ್ಲದ ಆಧಾರವಿಲ್ಲದ ನಂಬಿಕೆಗಳನ್ನು ಇಲ್ಲವೆ ಪದ್ಧತಿಗಳನ್ನು ಒಪ್ಪಿಕೊಂಡಾಗ ಅವು ಮೂಢನಂಬಿಕೆಗಳೆನಿಸಿಕೊಳ್ಳುತ್ತವೆ. ಹೀಗಾಗಿ ಎಲ್ಲ ನಂಬಿಕೆಗಳನ್ನು ಮೂಢನಂಬಿಕೆಗಳೆಂದು ಹೇಳಲು ಬರುವುದಿಲ್ಲ. ಹಲವಾರು ನಂಬಿಕೆಗಳಲ್ಲಿ ಸತ್ಯತೆ ಇದೆ, ವೈಜ್ಞಾನಿಕತೆ ಇದೆ. ಅಂಥವುಗಳು ಸಮಾಜಕ್ಕೆ, ವ್ಯಕ್ತಿಗೆ ಭೌತಿಕವಾಗಿ ಮಾನಸಿಕವಾಗಿ ಉಪಯುಕ್ತವೆನಿಸಿವೆ.
ನಂಬಿಕೆಗಳು ಹುಟ್ಟಿಕೊಳ್ಳಲು ಕಾರಣಗಳು ಹಲವಾರು. ಹಾಗೆ ಹುಟ್ಟಿಕೊಂಡ ನಂಬಿಕೆಗಳಿಗೆ ಹೆಚ್ಚಾಗಿ ಮಾಟ-ಮಂತ್ರ (ಭೂತಾರಾಧನೆ), ಧರ್ಮಗಳು(ದೇವರು), ಕಲ್ಪನೆಗಳು, ವಾಸ್ತವಿಕತೆ, ಅನುಭವ, ಕಾರ್ಯ-ಕಾರಣ ಸಂಬಂಧ ಭಯ ಮುಂತಾದವುಗಳು ಕಾರಣವಾಗಿವೆ.
ಪ್ರಾಚೀನ ಕಾಲದಲ್ಲಿ ಆದಿಮಾನವ ನೈಸರ್ಗಿಕ ವಿಪತ್ತುಗಳನ್ನು ಭಯವಿಸ್ಮಯಗಳಿಂದ ಕಂಡಿರಬೇಕು. ಸಿಡಿಲು ಗುಡುಗು ಬಿರುಗಾಳಿಗಳಿಗೆ ಹೆದರಿರಬೇಕು. ಮರಗಳು ಒಂದಕ್ಕೊಂದು ಮಸೆದು ಕಾಡಿಗೆ ಬೆಂಕಿ ಹತ್ತಿದಾಗ, ಕಾಡು ಪ್ರಾಣಿಗಳು ಅರಣ್ಯ ನಡುಗುವಂತೆ ಗುಡುಗಿದಾಗ, ದೊಡ್ಡ ದೊಡ್ಡ ಬಂಡೆಗಲ್ಲುಗಳು ಗುಡ್ಡದಿಂದ ಉರುಳಿದಾಗ ಗಾಬರಿಗೊಂಡಿರಬೇಕು. ಭೂಮಿ ನಡುಗಿದಾಗ, ಜ್ವಾಲಾಮುಖಿ ಕೆಂಡಕಾರಿದಾಗ, ತನ್ನವರು ರೋಗ-ರುಜಿನಗಳಿಂದ ಬಳಲಿ ಸಾವನ್ನಪ್ಪಿದಾಗ ಆತ ತಲ್ಲಣಿಸಿರಬೇಕು. ಸೃಷ್ಟಿಯ ಈ ಎಲ್ಲ ಅದ್ಭುತಗಳನ್ನು ಕಂಡು ಹೌಹಾರಿರಬೇಕು. ಇವೆಲ್ಲ ನಡೆಯಲು ಕಾರಣವೇನು? ಎಂದು ಚಿಂತಿಸಿ, ಅವುಗಳಲ್ಲಿ ಯಾವುದೊ ಒಂದು ಅದ್ಭುತಶಕ್ತಿ ಅಡಗಿರಬಹುದೆಂದು ಭ್ರಮಿಸಿರಬೇಕು. ಆ ಶಕ್ತಿಯೇ ಪ್ರಕೃತಿಯನ್ನು ನಿಯಂತ್ರಿಸುತ್ತದೆ ಎಂದು ತಿಳಿದು, ಆ ಅಗೋಚರವಾದ ಶಕ್ತಿಯನ್ನು ನಿಯಂತ್ರಿಸದಿದ್ದರೆ ತಾನು ಭೂಮಿಯ ಮೇಲೆ ಬದುಕುವುದು ಕಷ್ಟವೆಂದು ಭಾವಿಸಿ, ಆ ಶಕ್ತಿಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ನಿರ್ಣಯಿಸಿದಾಗ ಮಾಟ-ಮಂತ್ರಗಳು ಹುಟ್ಟಿಕೊಂಡಿರಬೇಕು. ಆ ಶಕ್ತಿಯನ್ನು ಮೊದಲು ಆತ ಭೂತವೆಂದೇ ತಿಳಿದುಕೊಂಡಿರಬೇಕು. ಆ ಭೂತವನ್ನು ತನ್ನ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಪಟ್ಟಾಗ ಆಚರಣೆ, ನಂಬಿಕೆಗಳು ಹುಟ್ಟಿಕೊಂಡಿರಬೇಕು.
ಭೂತಾರಾಧನೆಯು ಅತ್ಯಂತ ಪ್ರಾಚೀನವಾದುದೆಂದೂ, ಅದು ದ್ರಾವಿಡರಲ್ಲಿ ಮೊದಲಿನಿಂದಲೂ ನಡೆದು ಬಂದಿದೆಯೆಂದೂ ತಿಳಿದುಬರುತ್ತದೆ. ದ್ರಾವಿಡರ ನೆಲೆಯಾದ ದಕ್ಷಿಣ ಭಾರತದಲ್ಲಿಯೇ ಅದು ಹೆಚ್ಚಾಗಿ ಕಂಡುಬರುವುದು ಇದಕ್ಕೆ ನಿದರ್ಶನ. ಕರಾವಳಿಯಲ್ಲಿ ದೇವರಿಗಿಂತ ದೆವ್ವ-ಭೂತವೇ ಹೆಚ್ಚು ಪ್ರಭಾವಶಾಲಿಯೆಂದು ತಿಳಿದು ಆಚರಿಸುತ್ತಿರುವುದು ಇಂದಿಗೂ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಅದಕ್ಕೆ ಸಾಕ್ಷಿ ಎಂದರೆ “ಕಾಂತಾರ” ಚಿತ್ರ. ಭೂತವನ್ನು ಒಲಿಸಿಕೊಳ್ಳಲು, ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ನಡೆಸುವ ಮಾಟ-ಮಂತ್ರಗಳು; ಮಾಟದ ಗೊಂಬೆಗಳಿಗೆ ಸಗಣಿ, ಬೂದಿ ಬಳಸುವುದು; ಮಾಟಕ್ಕೆ ಒಳಗಾಗುವ ವ್ಯಕ್ತಿಯ ತಲೆ ಕೂದಲುಗಳನ್ನು ಅದಕ್ಕೆ ಸಿಕ್ಕಿಸುವುದು; ಅಂಗಾಲಿಗೆ ಹತ್ತಿದ ಮಣ್ಣು, ಉಗುರು ಉಪಯೋಗಿಸುವುದು: ಮಾಟಕ್ಕೆ ಸಹಾಯಕವಾಗುವ ವನಸ್ಪತಿಗಳು; ಮಾಟ ಮಾಡುವ ಸ್ಥಳ; ಮಾಟ ಮಾಡುವಾಗಿನ ನಿಷೇಧಗಳು; ಮಾಟವನ್ನು ಪ್ರತಿರೋಧಿಸುವ ನಿಂಬೆಹಣ್ಣು, ಕ್ಯಾರು, ಬಜಿ, ಕರಿದಾರ(ಕಪ್ಪುದಾರ), ಮೆಣಸಿನಕಾಯಿ, ಕುಂಕುಮ, ಉಪ್ಪು ಮುಂತಾದ ವಸ್ತುಗಳು ಇಡೀ ಕರ್ನಾಟಕದ ತುಂಬ ಅಷ್ಟೇ ಅಲ್ಲ, ದೇಶದ ಎಲ್ಲೆಡೆಯಲ್ಲಿಯೂ ಬಳಕೆಯಾಗುತ್ತಿರುವುದನ್ನು ಕಾಣುತ್ತೇವೆ.
ಉತ್ತರ ಕರ್ನಾಟಕದಲ್ಲಿ ಭೂತಾರಾಧನೆ ಇಂದು ಹೆಚ್ಚಾಗಿ ಕಂಡುಬರುವುದಿಲ್ಲವಾದರೂ ಮೊದಲು ಇತ್ತೆಂಬುದು ಖಚಿತ. ಈಗ ಅದು ಇತರ ಧರ್ಮಗಳ ಪ್ರಭಾವದಿಂದ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ ಅಷ್ಟೇ. ಭೂತಾರಾಧನೆ ಮತ್ತು ಅದಕ್ಕೆ ಸಂಬಂಧಿಸಿದ ಮಾಟ-ಮಂತ್ರಗಳ ಅನೇಕ ಪಳೆಯುಳಿಕೆಗಳು ಇಂದೂ ಉಳಿದು ಬಂದಿವೆ.
ಕಾಲ ಕಳೆದಂತೆ ”ಪ್ರಕೃತಿ”ಯು ತನ್ನಗತಿಯಲ್ಲಿ ಮುಂದುವರಿಯುವುದೇ ಹೊರತು, ತಾನು ಮಾಡಿದ ಮಾಟದಿಂದ ಅದನ್ನು ಬದಲಾಯಿಸಲಾಗುವುದಿಲ್ಲವೆಂಬ ಅಂಶ ಆದಿವಾಸಿಗೆ ಸ್ಪಷ್ಟವಾಗಿ, ಮೊದಲಿನ ಭ್ರಾಂತಿ ದೂರವಾದ ಮೇಲೆ ಮಾಟದ ಸ್ಥಾನವನ್ನು ಧರ್ಮ (Religion) ಪಡೆಯಿತು. ಹಾಗೇ ಭೂತದ ಸ್ಥಾನವನ್ನು ದೇವರು ಪಡೆದರು. ಹೀಗಾದಾಗ ದೇವಸ್ವರೂಪದ ಶಕ್ತಿಯನ್ನು ಒಲಿಸಿಕೊಳ್ಳಲು ಆತ ಭಯ-ಭಕ್ತಿಯಿಂದ ಪೂಜಿಸತೊಡಗಿರಬೇಕು. ಅದರಿಂದ ಧರ್ಮ ಉದಯವಾಯಿತು. ವೈದಿಕ ಧರ್ಮವೇ ಅತ್ಯಂತ ಪ್ರಾಚೀನವಾದುದು. ಅದರಿಂದ ವೈಷ್ಣವ-ಶೈವ ಧರ್ಮಗಳು ಕವಲೊಡೆದು ಇಡೀ ಭಾರತದ ತುಂಬ ಹರಡಿ ನಿಂತವು. ಇವುಗಳಿಂದ ಮತ್ತೆ ಅನೇಕ ಮತಗಳು ಹುಟ್ಟಿಕೊಂಡವು ಎಂದು ಹೇಳಲಾಗುತ್ತದೆ. ಈ ಧರ್ಮಗಳಿಗೆ ಅನುಗುಣವಾಗಿ ಅನೇಕ ಸಂಪ್ರದಾಯ, ಆಚರಣೆ, ನಂಬಿಕೆಗಳು ರೂಪಿತವಾದವು.
ಉತ್ತರ ಕರ್ನಾಟಕವಂತೂ ಧರ್ಮಗಳ ನೆಲೆವೀಡು. ಶೈವ, ವೀರಶೈವ, ವೈಷ್ಣವ ಮತಗಳು ಮಾಡಿದಷ್ಟು ಪ್ರಭಾವವನ್ನು ಈ ಭಾಗದಲ್ಲಿ ಮತ್ತಾವೂ ಮಾಡಿಲ್ಲ. ಅನೇಕ ಧರ್ಮ ಸ್ಥಾಪಕರು, ತತ್ವ ಪ್ರಚಾರಕರು ಹಾಗೂ ರಾಜಮನೆತನಗಳು ತಮ್ಮ ತಮ್ಮ ಧರ್ಮಗಳನ್ನು ಎತ್ತಿ ಹಿಡಿದರು. ಪೋಷಿಸಿದರು. ಉತ್ತರ ಕರ್ನಾಟಕದಲ್ಲಿ ಒಂದೊಂದು ಅವಧಿಯಲ್ಲಿ ಒಂದೊಂದು ಧರ್ಮ ಸಾಕಷ್ಟು ಪ್ರಭಾವ ಬೀರಿದ್ದರಿಂದ ಈ ಭಾಗದ ಸಂಸ್ಕೃತಿ, ಸಾಹಿತ್ಯ, ಕಲೆಗಳು ಹುಲುಸಾಗಿ ಬೆಳೆದು ನಿಂತವು. ಅವುಗಳಿಂದ ಹೊಸ ಹೊಸ ನಂಬಿಕೆ, ಸಂಪ್ರದಾಯಗಳು ಎಲ್ಲ ಕ್ಷೇತ್ರದಲ್ಲಿ ರೂಢಿಗೆ ಬಂದವು.
ಉತ್ತರ ಕರ್ನಾಟಕದಲ್ಲಿ ಶೈವ ಧರ್ಮದ ಪ್ರಭಾವ ಸಾಕಷ್ಟು ಆಗಿರುವಾಗಲೇ ಇದೇ ಪ್ರದೇಶದಲ್ಲಿ ಹುಟ್ಟಿಕೊಂಡ ವೀರಶೈವ ಧರ್ಮವೂ ತನ್ನ ಅಗಾಧವಾದ ಪ್ರಭಾವವನ್ನು ಬೀರಿತು. ಆ ಧರ್ಮದ ಪ್ರಮುಖ ತತ್ವಗಳಾದ ಕಾಯಕ, ದಾಸೋಹ ಹಾಗೂ ಈ ತತ್ವಗಳನ್ನು ಆಚರಣೆಯಲ್ಲಿ ತಂದು ಮಾನವ ಕೋಟಿಯ ಏಳ್ಗೆಗಾಗಿ ಶ್ರಮಿಸಿದ ಶರಣರ ಉದಾತ್ತ ಜೀವನಗಳು ಹೆಚ್ಚಿನ ಪ್ರಭಾವ ಬೀರಿದವು. ಶರಣರನ್ನು ಗುರುವೆಂದು, ದೇವರೆಂದು ಭಾವಿಸಿ ಜನ ಆರಾಧಿಸತೊಡಗಿದರು. ಹಾಗೇ ಜೈನ, ವೈಷ್ಣವ ಧರ್ಮಗಳ ಪ್ರಭಾವವೂ ಈ ನಾಡಿನ ಜನಪದರ ಆಚಾರ-ವಿಚಾರ ನಂಬಿಕೆಗಳ ಮೇಲೆ ಮುದ್ರೆ ಒತ್ತಿದವು. ಕಾಲ ಕಾಲಕ್ಕೆ ಬಂದ ಎಲ್ಲ ಪ್ರಭಾವಗಳನ್ನು ಹೀರಿಕೊಳ್ಳುತ್ತ ಪಾರಂಪರಿಕ ಸಂಪ್ರದಾಯ ನಂಬಿಕೆಗಳ ಜೊತೆಗೆ ಹೊಸದಾಗಿ ಬಂದವುಗಳನ್ನೂ ಸೇರಿಸಿಕೊಳ್ಳುತ್ತ ನಡೆದವು.
ಉತ್ತರ ಕರ್ನಾಟಕದ ಸಾಹಿತ್ಯ, ಕಲೆ, ಪಾರಂಪರಿಕ ಸಂಪ್ರದಾಯ, ರೂಢಿಗೆ ಬಂದವು. ಆಚರಣೆ, ನಂಬಿಕೆಗಳು ರೂಪಿತವಾದವು.

